Monday 6 February 2012

ದೇವಸ್ಥಾನಕಲಾ ಸಾಂಝಿ – ಸೃಜನಶೀಲ, ಸಾಂಪ್ರದಾಯಿಕ ಕಲೆ


ದೇವಸ್ಥಾನಕಲಾ ಸಾಂಝಿ – ಸೃಜನಶೀಲ, ಸಾಂಪ್ರದಾಯಿಕ ಕಲೆ  S.F.Huseni


ಮಲೆನಾಡಿನ ನಡುವಿನ ಸಂಪ್ರದಾಯಸ್ಥ ಕುಟುಂಬವೊಂದರ ಮದುವೆ. ಆ ಮದುವೆಗೆ ದೂರದೂರುಗಳಿಂದ ಹಲವಾರು ಜನ ಬಂದಿದ್ದರು. ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯುತ್ತಿದ್ದ ಮದುವೆಯ ಕಾರ್ಯಕ್ರಮಗಳು ಅಲ್ಲಿ ಬಂದಿದ್ದ ನಗರ ಜೀವನದ ಆಧುನಿಕ ಮನಸ್ಸಿನ ಅತಿಥಿಗಳಿಗೆ ಮುದನೀಡುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ವರಮಹಾಶಯನ ಬಾಸಿಂಗದಲ್ಲಿದ್ದ ಬಣ್ಣದ ಕಾಗದಗಳ ಸಿಂಗಾರ ಮತ್ತು ಮದುವೆ ಮಂಟಪವನ್ನು ಅಲಂಕರಿಸಿದ್ದ ಹಲವಾರು ಸಾಂಪ್ರದಾಯಿಕ ವಿನ್ಯಾಸಗಳಲ್ಲಿ ಕತ್ತರಿಸಿದ್ದ ಬಣ್ಣಬಣ್ಣದ ಜರೀ ಕಾಗದಗಳು ಅವರೆಲ್ಲರ ಮನಸ್ಸನ್ನಪಹರಿಸಿದ್ದವು. ರಾತ್ರೆ ಮದುಮಕ್ಕಳಿಗೆ ಸಜ್ಜುಗೊಳಿಸಿದ್ದ ‘ಮಧುಮಂಚ’ದ ತುಂಬೆಲ್ಲಾ ಅಂಟಿಸಿದ್ದ ಥರಾವರಿಯಾಗಿ ಕತ್ತರಿಸಿದ್ದ ಬಣ್ಣಬಣ್ಣದ ಕಾಗದಗಳು ಹೂವು ಬಳ್ಳಿಗಳ ವಿನ್ಯಾಸಗಳು ಸಹಾ ನೋಡುಗರಿಗೆ ಅತ್ಯಾಕರ್ಷಕವಾಗಿ ಕಾಣುತ್ತಿದ್ದವು. ಅದನ್ನು ನೋಡಿದವರಿಗೆ ಬೇರೆಲ್ಲೂ ಕಾಣಸಿಗದ ಆ ಬಣ್ಣದ ಕಾಗದದ ಅಲಂಕಾರದ ಬಗೆಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಅವರೆಲ್ಲರನ್ನು ಆಕರ್ಷಿಸಿದ ಅದು “ಸಾಂಝಿ ಕಲೆ”. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಲೆಂದೇ ಹುಟ್ಟಿಕೊಂಡ ಕಳೆದ ಹತ್ತಾರು ಶತಮಾನಗಳಿಂದಲೂ ಭಾರತದಲ್ಲಿ ರೂಢಿಯಲ್ಲಿರುವ ಒಂದು ಜನಪದ ಕಲೆ. ಮದುವೆ ಮೊದಲಾದ ಕಾರ್ಯಕ್ರಮಗಳ ಅಲಂಕರಣದ ಉಪಯೋಗದಲ್ಲಷ್ಟೇ ಅಲ್ಲದೆ ಭಕ್ತಿಮಾರ್ಗದಲ್ಲಿ ಹುಟ್ಟಿಕೊಂಡ ಕಾರಣ ದೇವಾಲಯಗಳ ಅಲಂಕಾರದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದ ಕಾರಣದಿಂದ ದೇವಸ್ಥಾನ ಕಲಾಸಾಂಝಿ ಎಂದೇ ಪ್ರಖ್ಯಾತವಾಗಿದ್ದ ಕಲೆ. ಅಥವಾ ಸರಳವಾಗಿ ಹೇಳಬೇಕೆಂದರೆ ಅದೊಂದು ರೀತಿಯ “ಪೇಪರ್ ಕಟಿಂಗ್ ಆರ್ಟ್”.
ಕಲಾವಿದನೊಬ್ಬ ತನ್ನ ಅಭಿವ್ಯಕ್ತಿಗಾಗಿ ಆಯ್ದುಕೊಳ್ಳುವ ಮಾಧ್ಯಮಗಳು ಹಲವಾರು. ತನ್ನ ಆಸಕ್ತಿ ಹಾಗೂ ತನ್ನೊಳಗೆ ಹುದುಗಿರುವ ಸೃಜನಶೀಲ ಮನಸ್ಸಿಗನುಗುಣವಾಗಿ ಓರ್ವ ಆಯ್ದುಕೊಳ್ಳುವ ಮಾಧ್ಯಮದಲ್ಲಿ ಆತ ತನ್ನ ಅಸಕ್ತಿಗನುಗುಣವಾಗಿ ಏನಾದರೂ ಸಾಧನೆ ಮಾಡುವುದು ಸಾಧ್ಯವಾಗುತ್ತದೆ. ಕೆಲವು ಮಾಧ್ಯಮಗಳು ಕಲಾವಿದನೊಬ್ಬನ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸಲು ಅತ್ಯಂತ ಸೂಕ್ತ ಮಾಧ್ಯಮವಾಗಿರುತ್ತವೆ. ಅಂತಹ ಪ್ರಕಾರದಲ್ಲಿ “ಪೇಪರ್ ಕಟಿಂಗ್ ಕಲೆ” ಸಹಾ ಒಂದು. ನೋಡಲು ಅತ್ಯಂತ ಸುಲಭ ಎಂದೇ ಭಾಸವಾಗುವ ಅದರೆ ಅದನ್ನು ಕರಗತ ಮಾಡಿಕೊಂಡು ಪರಿಣಿತಿಗಳಿಸಲು ಅತ್ಯಂತ ಕಷ್ಟವಾಗಿರುವ ಕಲೆಯೇ ಪೇಪರ್ ಕಟಿಂಗ್ ಕಲೆ.
ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ‘ವಿಶ್ವದ ಅತ್ಯಂತ ಪ್ರಾಚೀನ ಜನಪದ ಕಲೆ’ ಎಂದು ಇದನ್ನು ವರ್ಣಿಸಲಾಗುತ್ತದೆ.  ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಇದರ ಹುಟ್ಟು ಆದದ್ದು ಚೀನಾದ ಜನಪದರಲ್ಲಿ ಎಂಬ ಒಂದು ಅಭಿಪ್ರಾಯವಿದೆ. ಇದನ್ನು ಚೀನಾದ ಅತೀ ಪ್ರಾಚೀನ ಹಾಗೂ ಅತೀ ಜನಪ್ರಿಯ ಹವ್ಯಾಸ ಎಂದೇ ಕರೆಯಲಾಗುತ್ತದೆ. ಕಾಗದವನ್ನು ಅನ್ವೇಷಿಸಿ ಜಗತ್ತಿಗೆ ಅದನ್ನು ಕೊಡುಗೆಯಾಗಿ ನೀಡಿದ ಚೀನೀಯರು ಸಹಜವಾಗೇ ಕಾಗದದ ಮೂಲಕ ವಿಶಿಷ್ಟ ಕಲೆಯೊಂದಕ್ಕೆ ಜನ್ಮ ನೀಡಿರಬಹುದು. ಚೀನಾದ ಜನ ಅದರಲ್ಲೂ ಅಲ್ಲಿನ ಮಹಿಳೆಯರು  ಈ ಕಲೆಯ ಉಗಮಕ್ಕೆ ಕಾರಣರು ಎನ್ನುತ್ತಾರೆ.
ಈ ಕಲೆಯ ಅಭಿವ್ಯಕ್ತಿ ಚೀನಾ ಜನಪದರಲ್ಲಿ ಹುಟ್ಟಿ ನಂತರ ಇತರ ಎಲ್ಲಾ ದೇಶಗಳಿಗೂ ಹರಡಿತೆಂದು ಹೇಳಲಾಗುತ್ತದಾದರೂ ಚೀನಾದ ಜೊತೆಜೊತೆಗೇ ಅಥವಾ ಅದಕ್ಕಿಂತಲೂ ಮೊದಲೇ ಈ ಕಲೆ ಭಾರತದಲ್ಲಿದ್ದಿರಬಹುದು ಎಂಬುದಕ್ಕೆ ಭಾರತೀಯ ಸಾಂಪ್ರದಾಯಿಕ ಅಚರಣೆಗಳನ್ನು ನೋಡಿದಾಗ ಹಲವಾರು ಉದಾಹರಣೆಗಳು ದೊರೆಯುತ್ತವೆ. ನಮ್ಮಲ್ಲಿ ಮದುವೆಯ ಸಂದರ್ಭಗಳಲ್ಲಿ ಗಂಡಿಗೆ ಕಟ್ಟುವ ಬಾಸಿಂಗದಲ್ಲಿ ಇಂತಹ ಸುಂದರ ವಿನ್ಯಾಸಗಳನ್ನು ಕಾಣಬಹುದು. ಆರಂಭದಲ್ಲಿ ಹೇಳಿದಂತೆ ಮಲೆನಾಡಿಗರ ಮದುವೆ ಸಮಯದಲ್ಲಿ ಮುಖ್ಯ ಅಲಂಕರಣ ಸಾಮಗ್ರಿಯಾಗಿ ಬಣ್ಣದ ಕಾಗದಗಳ ಕತ್ತರಿಸಿದ ವಿನ್ಯಾಸಗಳನ್ನೇ ಬಳಸಲಾಗುತ್ತದೆ. ಮದುವೆ ಮನೆಯ ಬಣ್ಣದ ಕಾಗದದ ಅಲಂಕಾರಕ್ಕೆಂದೇ ಪರಿಣಿತರಾದ ಕಲಾವಿದರಿದ್ದು ಮದುವೆ ಮನೆಯೊಂದರ ಅಲಂಕಾರಕ್ಕೆ ಐದಾರು ಸಾವಿರದವರೆಗೆ ಶುಲ್ಕ ವಸೂಲು ಮಾಡಿಕೊಳ್ಳುತ್ತಾರೆ. ಗೌರಿ ಹಬ್ಬದಂತಹ ಹಿಂದೂ ಹಬ್ಬಗಳಲ್ಲಿ ಮಹಿಳೆಯರು ಬಾಗಿನದ ವಿನಿಮಯ ಮಾಡಿಕೊಳ್ಳುವಾಗ ಬಾಗಿನದ ಮೊರಗಳನ್ನು ಮುಚ್ಚುವುದು ಬಣ್ಣದ ಕಾಗದಗಳಿಂದಲೆ. ಪೂಜೆಯಲ್ಲಿ ಉಪಯೋಗಿಸುವ ಹತ್ತಿಯಿಂದ ತಯಾರಿಸುವ “ಗೆಜ್ಜೆ-ವಸ್ತ್ರ”ಗಳನ್ನು ಅಲಂಕರಿಸುವುದೂ ಕತ್ತರಿಸಿದ ಬಣ್ಣದ ಕಾಗದದಿಂದಲೇ. ಬೀಜಾಪುರ ಬೀದರ್ ಗುಲ್ಬರ್ಗಾ ಕಡೆಯ ಮುಸ್ಲಿಂ ಕುಟುಂಬಗಳಲ್ಲಿ ಮದುವೆಯ ಸಮಯದಲ್ಲಿಗಂಡಿನ ಮನೆಯಿಂದ ಹೆಣ್ಣಿನ ಮನೆಗೆ ಸಿಹಿ ಕಳಿಸುವ ಸಂಪ್ರದಾಯವಿದೆ. ಹಾಗೆ ಕಳಿಸುವ ಸಿಹಿ ತುಂಬಿದ ಬುಟ್ಟಿಯ ಮೇಲೆ ಹಲವು ವಿನ್ಯಾಸಗಳಲ್ಲಿ ಕತ್ತರಿಸಿದ ಕೆಂಪು ಮತ್ತು ಹಸಿರು ಬಣ್ಣದ ಕಾಗದ ಅಂಟಿಸಲಾಗುತ್ತದೆ. ಭಾರತದ ಅತೀ ಪ್ರಾಚೀನ ಕಲೆಯಾದ ರಂಗೋಲಿಗೆ ವಿನ್ಯಾಸಗಳನ್ನು ಮಾಡಿಕೊಳ್ಳುತ್ತಿದ್ದುದೇ ಸಾಂಝಿಯ ವಿನ್ಯಾಸಗಳ ಆಧಾರದಲ್ಲಿ. ಕಾಗದದ ವಿವಿದ ಮಡಿಕೆಗಳನ್ನು ಮಾಡಿ ಪ್ರಮಾಣಬದ್ಧವಾಗಿ ಕತ್ತರಿಸಿ ಅದನ್ನು ಬಿಡಿಸಿ ನೆಲದ ಮೇಲೆ ಹಾಸಿ ಅದರ ಮೇಲೆ ಬಣ್ಣಬಣ್ಣದ ರಂಗೋಲಿಯನ್ನು ಉದುರಿಸಿ ಕಾಗದವನ್ನು ನಿಧಾನಕ್ಕೆ ಮೇಲೆತ್ತಿದರೆ ಸುಂದರವಾದ ರಂಗೋಲಿಯ ವಿನ್ಯಾಸಗಳು ಗೋಚರಿಸುತ್ತವೆ. ದೇವಾಲಯಗಳಲ್ಲೂ ಇನ್ನಿತರ ಧಾರ್ಮಿಕ ಸಮಾರಂಭಗಳಲ್ಲೂ ದೊಡ್ದ ದೊಡ್ಡ ಪ್ರಮಾಣದಲ್ಲಿ ರಂಗೋಲಿ ಬಿಡಿಸಲು ಈ ಕಲೆ ಅತ್ಯಂತ ಸಹಕಾರಿಯಾಗಿರುತ್ತಿತ್ತು. ನಮ್ಮ ದೇಶದ ಹಿರಿಮೆಯನ್ನು ವಿಶ್ವದಾದ್ಯಂತ ಸಾರುತ್ತಿರುವ ದೇವಾಲಯಗಳಲ್ಲಿನ ಭಿತ್ತಿಗಳಲ್ಲಿನ ಸಮಸ್ವರೂಪದ ಜಾಲಂಧ್ರ, ಛಾವಣಿಯಲ್ಲಿರುವ ಭುವನೇಶ್ವರಿಗಳು ಮತ್ತಿತರ ಅಲಂಕರಣೆಯ ವಿನ್ಯಾಸಕ್ಕೆ ಸಹಾಯಕವಾಗಿದ್ದುದು ಸಾಂಝಿ ವಿನ್ಯಾಸಗಳೇ. ಇಂದಿಗೂ ಸಭೆ ಸಮಾರಂಭಗಳಲ್ಲಿ ಸ್ವಾಗತ ತೊರಣಗಳನ್ನೂ ಸಮಾರಂಭ ನಡೆಯುವ ಸ್ಥಳದ ಮೇಲ್ಭಾಗದ ಅಲಂಕರಣೆಯನ್ನೂ ಪೇಪರ್ ಕಟಿಂಗ್‌ಗಳಿಂದಲೇ ನಡೆಸುತ್ತಾರಷ್ಟೇ? ತಮಿಳುನಾಡು ಮತ್ತು ಕರ್ನಾಟಕದ ಭೂ ಪ್ರದೇಶಗಳು ಸೇರುವ ಭಾಗದ ಊರುಗಳಲ್ಲಿ ಮನೆ ಕಟ್ಟುವಾಗ ಗಾರೆ ಅಥವಾ ಸಿಮೆಂಟಿನ ಮೇಲೆ ಕಾವಿ ಬಣ್ಣದ ಚಿತ್ತಾರ ಮೂಡಿಸುವಾಗ ಉಪಯೋಗಿಸುವುದೂ ಸಹಾ ಈ ಮಾದರಿಯಲ್ಲಿ ಕತ್ತರಿಸಿದ ಕಾಗದವನ್ನೇ. ಇವುಗಳಲ್ಲಿ ಕೆಲವು ‘ಶುದ್ಧ ಸಾಂಝಿ’ ಆದರೆ ಮತ್ತೆ ಕೆಲವು ಅದರ ರೂಪಾಂತರಗಳಾಗಿರಬಹುದು. ಅಲ್ಲದೆ ಸಾಂಝಿಯ ಆರಂಭ ಪುರಾಣ ಪುರುಷ ಶ್ರೀಕೃಷ್ಣನ ಕಾಲದಷ್ಟು ಪುರಾತನ ಎಂಬುದು ಇತಿಹಾಸಕಾರರ ಅಭಿಪ್ರಾಯ. ನಮ್ಮ ದೇವಾಲಯ ಸಂಸ್ಕೃತಿ, ನಮ್ಮ ಜನಪದರ ರಂಗೋಲಿ, ಬಾಗಿನ ಕೊಡುವ ಪದ್ಧತಿ ಮತ್ತು ಮದುವೆಯ ಸಂಸ್ಕಾರಗಳು ಯಾವಾಗಿನಿಂದ ಭಾರತದಲ್ಲಿ ಇವೆಯೋ ಅಂದಿನಿಂದಲೂ ಈ ಕಲೆ ಭಾರತದಲ್ಲೂ ಇದೆ ಎಂದೇ ತಿಳಿಯಬಹುದು. ಹಾಗಿರುವಾಗ ನಮ್ಮದೇ ಮಣ್ಣಿನಲ್ಲಿ ಹುಟ್ಟಿಕೊಂಡು ಜನಪ್ರಿಯವಾಗಿದ್ದ ಈ ಕಲೆಗೆ ಬೇರೆ ದೇಶದಿಂದ ಆಮದಾದ ಕಲೆ ಎಂಬ ಪೊಳ್ಳು ಕಿರೀಟವಾದರೂ ಯಾಕೆ ಬೇಕು?
ಸಾಂಝಿಯ ಉಗಮ.
ಪೇಪರ್ ಕಟಿಂಗ್ ಕಲಾವಿದರು ಕಾಗದವನ್ನು ಚಕಚಕನೆ ಕತ್ತರಿಸುವುದನ್ನು ನೋಡುವುದೇ ಒಂದು ಅಪೂರ್ವ ಅನುಭವ.
ಮೊದಲ ಬಾರಿಗೆ ನಾನು ಪೇಪರ್ ಕಟಿಂಗ್ ಕೌಶಲ್ಯವನ್ನು ನೋಡಿದ್ದು ಪ್ರಾಥಮಿಕ ಶಾಲೆಯಲ್ಲಿದ್ದಾಗ. ನಮ್ಮ ಮುಖ್ಯೋಪಾಧ್ಯರು ಮಕ್ಕಳಿಗೆ ಹೊಸ ವಿಷಯಗಳ ಅರಿವಾಗಲಿ ಎಂಬ ಸದುದ್ದೇಶದಿಂದ ಆಗಾಗ ಯಕ್ಷಿಣಿಗಾರರನ್ನೋ ಕಲಾವಿದರನ್ನೋ ಕರೆಸಿ ಕಾರ್ಯಕ್ರಮ ಮಾಡಿಸುತ್ತಿದ್ದರು. ಹಾಗೆ ನಡೆದ ಪೇಪರ್ ಕಲಾವಿದರೊಬ್ಬರ ಒಂದು ಕಾರ್ಯಕ್ರಮದಲ್ಲಿ ಮೊದಲಬಾರಿಗೆ ಕಾಗದ ಕತ್ತರಿಸುವ ಕೈಗಳಲ್ಲಿನ ಕೌಶಲ್ಯವನ್ನು ಗಮನಿಸಿದ್ದೆ. ಆನಂತರ ಹೈಸ್ಕೂಲ್‌ನಲ್ಲಿದ್ದ ಡ್ರಾಯಿಂಗ್ ಮಾಸ್ಟರು ಆಗಾಗ ಕಾಗದ ಕತ್ತರಿಸುವ ಕಲೆಯನ್ನು ಪ್ರದರ್ಶಿಸುತ್ತಿದ್ದರು. ನಮ್ಮ ತಾಯಿ ಸಹಾ ದೇವರ ಪೂಜೆಗೆ ಹಬ್ಬಗಳ ಸಂದರ್ಭದಲ್ಲಿ ಮಾಡುತ್ತಿದ್ದ ಹತ್ತಿಯ ಹಾರಗಳಿಗೆ ಅಲಂಕಾರಿಕವಾಗಿ ಅಲ್ಯುಮಿನಿಯಂ ಫಾಯಿಲ್‌ನ ಬಣ್ಣಬಣ್ಣದ ತೆಳು ಹಾಳೆಗಳನ್ನು ಕತ್ತರಿಸಿ ಅಂಟಿಸಿ ಅದರ ಅಂದವನ್ನು ಹೆಚ್ಚಿಸುತ್ತಿದ್ದರು. ಮಲೆನಾಡಿನ ಕೆಲವು ಮದುವೆಗಳಲ್ಲಿ ಅಲಂಕಾರಕ್ಕೆ ಪೇಪರ್ ಕಟಿಂಗ್ ಉಪಯೋಗಿಸುವುದನ್ನೂ ನೋಡಿದ್ದೆ, ಕೊಳ್ಳೇಗಾಲ ತಾಳವಾಡಿ ಮೊದಲಾದ ಗಡಿನಾಡಿನ ಊರುಗಳಲ್ಲಿ ದೇವಾಲಯದ ಜೊತೆಗೆ ಹಳೆಕಾಲದ ಮನೆಗಳಲ್ಲೂ ಸಿಮೆಂಟ್ ಅಥವಾ ಗಾರೆಯ ಮೇಲೆ ಈ ಬಗೆಯ ವಿನ್ಯಾಸಗಳನ್ನು ನೋಡಿದ್ದೆ. ಆದರೆ ಆಗೆಲ್ಲ ಅದೊಂದು ವಿಶಿಷ್ಟವಾದ ಕಲಾ ಪ್ರಕಾರವೆಂದೂ ಭಾರತದ ಜನಪದದಲ್ಲೇ ಹುಟ್ಟಿಕೊಂಡ ಸೃಜನಶೀಲ ಕಲೆ ಎಂದೂ ಗೊತ್ತಿರಲಿಲ್ಲ. ನಿಧಾನಕ್ಕೆ ಕರ್ನಾಟಕದಲ್ಲಿ ಕ್ರಿಯಾಶೀಲರಾಗಿರುವ ಹಲವಾರು ಕಲಾವಿದರ ಪರಿಚಯವಾಗುತ್ತಿದ್ದಂತೆ ಅದರ ಆಳ ವಿಸ್ತಾರಗಳ ಅರಿವಾಗತೊಡಗಿತು.
ಸಾಂಝಿ’ ಪದದ ಹಿನ್ನೆಲೆಯಾದರೂ ಏನು?
ಈ ಪದಕ್ಕೆ ಅತ್ಯಂತ ಖಚಿತವಾದ ಮೂಲ ಇದ್ದಂತಿಲ್ಲ. ಅಲಂಕರಣ ಎಂಬರ್ಥದ ‘ಸಜಾವಟ್’ ಅಥವ ‘ಸಜ್ಜಾ’ ಎಂಬ ಪದ ಇದರ ಮೂಲವಿರಬಹುದು. ಕೆಲವರು ‘ಸಂಧ್ಯಾ’ ಎಂಬ ಸಂಸ್ಕೃತ ಪದವೇ ಇದರ ಮೂಲ ಪದ ಎನ್ನುತ್ತಾರೆ. ಹಿಂದಿಯ ‘ಸಾಂಜ್’ (ಸಾಯಂಕಾಲ) ಸಹಾ ಈ ಶಬ್ದದ ವ್ಯುತ್ಪತ್ತಿಗೆ ಕಾರಣ ಇರಬಹುದು. ಬಹಳ ಹಿಂದೆ ಇದು ಬೆಳೆದು ಬಂದ ಮಥುರಾ ಮತ್ತು ಬೃಂದಾವನದ ಭಾಗಗಳಲ್ಲಿ (ಮುಖ್ಯವಾಗಿ ಬೃಜಭಾಷೆ ಉಪಯೋಗದಲ್ಲಿದ್ದ ಭಾಗಗಳಲ್ಲಿ) ಸಂಜೆಯ ವೇಳೆಗೆ ದಂಪತಿಗಳು ಮನೆಯ ಬಾಗಿಲು ಅಥವಾ ಜಗಲಿಯಲ್ಲಿ ಕುಳಿತು ಪರಸ್ಪರ ಸಂಭಾಷಿಸುತ್ತ ರಚಿಸುತ್ತಿದ್ದ ಆಕೃತಿಗಳಂತೆ ಇವು.
ಸಾಂಝಿಯ ರಚನೆಯ ಆರಂಭದ ಕಾಲವನ್ನು ಪುರಾಣಗಳ ಕಾಲಕ್ಕೆ ಕೊಂಡೊಯ್ಯಲಾಗುತ್ತದೆ. ‘ಸಾಂಝಿಕಲೆಯ ಮೂಲವು ರಾಧಾಳಿಗೆ ಕೃಷ್ಣನ ಮೇಲಿದ್ದ ಮೋಹದಲ್ಲಿದೆ’ ಎನ್ನುತ್ತಾರೆ. ಕೃಷ್ಣನನ್ನು ಒಲಿಸಿಕೊಳ್ಳಲು ಕೃಷ್ಣನಿಗಾಗಿ ಕಾಯುತ್ತಿದ್ದ ರಾಧೆಯು ಪ್ರೇಮಪರವಶಳಾಗಿ ಮನೆಯ ಗೋಡೆಯ ಮೇಲೆಲ್ಲಾ ಹಲವಾರು ಚಿತ್ತಾರಗಳನ್ನು ಮಾಡುತ್ತಿದ್ದಳಂತೆ. ಅದನ್ನು ಅನುಸರಿಸಿದ ಇತರ ಗೋಪಿಕಾ ಸ್ತ್ರೀಯರೂ ಸಹಾ ಅವರವರ ಮನೆಯ ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುತ್ತಿದ್ದರಂತೆ. ನಂತರ ಆ ಹವ್ಯಾಸವು ಅದೇ ಚಿತ್ತಾರಗಳನ್ನು ಕಾಗದದಲ್ಲಿ ಕತ್ತರಿಸುವ ಮೂಲಕ ರೂಪಾಂತರಗೊಂಡಿತು. ಹಾಗೆ ಅಲ್ಲಿ ಹುಟ್ಟಿಕೊಂಡ ಈ ಕಲೆಯು ಹೆಚ್ಚು ಪ್ರಚಾರಕ್ಕೆ ಬಂದದ್ದು ಸಹಾ ಕೃಷ್ಣನಿಗೆ ಸಂಬಂಧಿಸಿದ ಮಥುರಾ ಮತ್ತು ಬೃಂದಾವನಗಳಲ್ಲೆ. ಇಂದಿಗೂ ಆ ಭಾಗದಲ್ಲೇ ಸಾಂಝಿ ಕಲಾವಿದರು ಹೆಚ್ಚಾಗಿದ್ದಾರೆ. ನಂತರದಲ್ಲಿ ಇದು ಜನಸಮೂಹದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿತು. ರಾಧಾ ಕೃಷ್ಣರ ಕಥಾ ರೂಪಕಗಳನ್ನು ಪ್ರಸ್ತುತಪಡಿಸಲು ಈ ಕಲೆಯ ಬಳಕೆಯಾಗುತ್ತಿತ್ತು. ‘ಸಾಂಝಿ ಎಂದರೆ ಕೃಷ್ಣನ ಕಥೆ’ ಎನ್ನುವಂತಾಗಿತ್ತು. ಮದುವೆಯಾಗದ ಹುಡುಗಿಯರು ಸಾಂಝಿಯನ್ನೆ ಆರಾಧಿಸುವ ಮೂಲಕ ಅದಕ್ಕೆ ದೈವತ್ವವನ್ನು ಕಲ್ಪಿಸಿದರು. ಸಾಂಝಿಯನ್ನೆ ಒಂದು ದೇವರನ್ನಾಗಿ ಪರಿಕಲ್ಪಿಸಿಕೊಂಡು ಗೋಡೆಯ ಮೇಲೆ ಸಾಂಝಿ ದೇವತೆಯ ಚಿತ್ರ ಬಿಡಿಸಿ ಅದನ್ನು ಆರಾಧಿಸುವ ಕ್ರಮವೂ ಕೆಲವೆಡೆ ರೂಢಿಯಲ್ಲಿತ್ತು. ಈ ಕಾರಣಗಳಿಂದ ‘ಸಾಂಝಿ’ ಎಂದರೆ ಅದು ಭಕ್ತಿಮಾರ್ಗದ ಆಚರಣೆಗಳಲ್ಲೊಂದಾಯಿತು. ದೇವಾಲಯಗಳ ಅಲಂಕರಣೆಗೂ ಸಾಂಝಿ ವಿನ್ಯಾಸಗಳು ಬಳಕೆಗೆ ಬಂದವು. ದೇವಾಲಯದ ವಿಶಾಲವಾದ ಅಂಗಳದಲ್ಲಿ ದೊಡ್ಡದೊಡ್ಡ ರಂಗೋಲಿ ಹಾಕುವಾಗ ದೇವತೆಗಳ (ಮುಖ್ಯವಾಗಿ ಕೃಷ್ಣನ ಲೀಲೆಗಳ) ಸುಂದರ ವಿನ್ಯಾಸದ ಸಾಂಝಿಯನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅದರೊಳಗೆ ಬಣ್ಣದ ಪುಡಿಯನ್ನು ತುಂಬಿಸಿದರೆ ಅದ್ಭುತವಾದ ನಯನ ಮನೋಹರ ರಂಗೋಲಿ ಕಂಗೊಳಿಸುತ್ತಿತ್ತು. ಹಾಗೆ ರಂಗೋಲಿಯನ್ನು ತಯಾರಿಸಲು ಹಿಡಿಯುವ ನಾಲ್ಕಾರು ಘಂಟೆಗಳ ಕಾಲ ಮಹಿಳೆಯರು ಭಕ್ತಿಗೀತೆಯನ್ನು ಹಾಡುತ್ತಾ ಭಗವಂತನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಹೀಗೆ ದೇವಾಲಯಗಳಲ್ಲಿ (ವಿಶೇಷವಾಗಿ ಉತ್ತರ ಭಾರತದ ದೇವಾಲಯಗಳ ಕಾರ್ಯಕ್ರಮಗಳಲ್ಲಿ) ಹೆಚ್ಚಾಗಿ ಬಳಕೆಯಾಗುತ್ತಿದ್ದುದರಿಂದ ಇದು “ದೇವಸ್ಥಾನಕಲಾ ಸಾಂಝಿ” ಎಂದೇ ಪ್ರಸಿದ್ಧವಾಯಿತು. ಪುರಿ ಜಗನ್ನಾಥ ದೇವಾಲಯದ ಉತ್ಸವದ ಸಮಯದಲ್ಲಿ ಇಂದಿಗೂ ಊರಲ್ಲೆಲ್ಲಾ ರಂಗೋಲಿ ಹಾಕುವಾಗ ಉಪಯೋಗಿಸುವುದು ಸಾಂಝಿ ವಿನ್ಯಾಸಗಳನ್ನೇ. ವಿಶೇಷ ಸಂದರ್ಭಗಳಲ್ಲಿ ರಚಿಸುವ ಸಾಂಝಿ ರಂಗೋಲಿಯ ಅಳತೆ ಕೆಲವೊಮ್ಮೆ 10-12 ಅಡಿಗಳಷ್ಟು ವಿಸ್ತಾರದಲ್ಲಿರುತ್ತದೆ. ವೃತ್ತಾಕಾರ, ಆಯತಾಕಾರ ಅಥವ ಚೌಕಾಕಾರದಲ್ಲಿರುವ ರಂಗೋಲಿಗೆ ಅಂಚಿನಲ್ಲಿ ಹೂವಿನ ಅಲಂಕಾರವಿದ್ದು ಅದರೊಳಗೆ ಕೃಷ್ಣನ ರಾಸಲೀಲೆಯ ಹಲವಾರು ದೃಷ್ಯಾವಳಿಗಳಿರುತ್ತವೆ. ಉತ್ತರಪ್ರದೇಶದಲ್ಲಿ ಒಂದು ತಿಂಗಳು ನಡೆಯುವ ‘ಬೃಜ್ ಯಾತ್ರಾ’ ಸಮಯದಲ್ಲಿ ಪೂಜೆಯ ಮುಖ್ಯ ಪರಿಕರ ಸಾಂಝಿ ರಂಗೋಲಿಯೇ. ಹರಿದ್ವಾರ ಮೊದಲಾದ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಂಝಿ ವಿನ್ಯಾಸ ಕತ್ತರಿಸುವ ಹಲವಾರು ಕುಟುಂಬಗಳಿದ್ದು ಅವರು ವಾಸವಾಗಿರುವ ಬೀದಿಗೆ “ಸಾಂಝಿ ಬೀದಿ” ಎಂಬ ಹೆಸರಿದೆ.
ಭಾರತದಲ್ಲೂ ವಿದೇಶಗಳಲ್ಲೂ ಹಲವಾರು ಹೆಸರುಗಳಲ್ಲಿ ಪ್ರಚಲಿತವಿರುವ ಈ ಪೇಪರ್ ಕಟಿಂಗ್ ಕಲೆಯಲ್ಲಿ ಹಲವಾರು ವ್ಯತ್ಯಾಸಗಳಿವೆ. ಚೀನಾ ಜಪಾನ್‌ಗಳಲ್ಲಿ ಪ್ರಚಲಿತವಿರುವ ಕಿರಿಗಾಮಿಯಲ್ಲಿ ಕಾಗದವನ್ನು ಒಂದಕ್ಕಿಂತ ಹೆಚ್ಚು ಬಾರಿ ಮಡಿಚಿ ನಂತರ ಕತ್ತರಿಸುವುದರಿಂದ ಸಮಸ್ವರೂಪದ (ಸಿಮಿಟ್ರಿಕಲ್) ಅನೇಕ ಮಾದರಿಗಳು ಸಿಕ್ಕುತ್ತವೆ. ಮೆಕ್ಸಿಕೋ ಪೋಲೆಂಡ್‌ಗಳಲ್ಲಿ ಉಪಯೋಗಿಸುವ ವಿಧಾನ ಮತ್ತೂ ಕಠಿಣವಾದುದು. ಸುಮಾರು 50-60 ಕಾಗದಗಳನ್ನು ಪುಸ್ತಕದ ರೂಪದಲ್ಲಿ ಜೋಡಿಸಿಕೊಂಡು ಅದಕ್ಕೆಂದೇ ವಿಶೇಷವಾಗಿ ರೂಪಿಸಿಕೊಂಡ ತೆಳುವಾದ ಉಳಿಯಂತಹ ಉಪಕರಣವನ್ನು ಉಪಯೋಗಿಸುತ್ತಾ ಸುತ್ತಿಗೆಯಿಂದ ಹೊಡೆಯುತ್ತಾ ಒಟ್ಟೊಟ್ಟಿಗೆ ಐವತ್ತರವತ್ತು ಪ್ರತಿಗಳನ್ನು ತೆಗೆಯುತ್ತಾರೆ. (ಸಮಾರಂಭಗಳ ಅಲಂಕರಣೆಗೆ ಹೆಚ್ಚು ಪ್ರತಿಗಳು ಬೇಕಾದಾಗ ಈ ವಿಧಾನ ಉಪಯುಕ್ತವೆನ್ನಿಸುವುದರಿಂದ ನಮುಲ್ಲೂ ಮದುವೆ ಮಂಟಪಗಳನ್ನೂ, ಮಧುಮಂಚಗಳನ್ನೂ ಅಲಂಕರಿಸುವ ಕಲಾವಿದರು ಇದೇ ವಿಧಾನವನ್ನು ಅನುಸರಿಸುತ್ತಾರೆ ಎಂಬುದು ವಿಶೇಷವೆನ್ನಿಸುತ್ತದೆ!) ಸಾಂಝಿಯಲ್ಲಿ ಕಾಗದದ ಮಡಿಕೆಗಳ ಸಂಖ್ಯೆ ಕಡಿಮೆ ಅಥವ ಕೆಲವೊಮ್ಮೆ ಇಲ್ಲವೆಂದರೂ ನಡೆದೀತು. ರಂಗೋಲಿ ವಿನ್ಯಾಸಗಳನ್ನು ರಚಿಸುವಾಗ ನಾಲ್ಕು ಅಥವಾ ಆರು ಮಡಿಕೆ ಮಾಡಿದರೆ ದೇವತೆಗಳ ಚಿತ್ರ ಕತ್ತರಿಸುವಾಗ ಕಾಗದವನ್ನು ಮಡಿಸುವ ಅವಶ್ಯಕಥೆಯೇ ಇಲ್ಲ.
ನಿಂತ ನೀರಾಯಿತೆ?
ಭಕ್ತಿಮಾರ್ಗದ ಆಂಗವಾಗಿ ದೇವಾಲಯಗಳಲ್ಲಿ ಹುಟ್ಟಿಕೊಂಡ ಈ ಕಲೆ ಮೊದಲಿಗೆ ಕೃಷ್ಣನ ಮತ್ತು ರಾಧೆಯರ ವಿವಿಧ ರೂಪಗಳನ್ನು ನಿರೂಪಿಸುವಲ್ಲಿ ಉಪಯೋಗವಾಗುತ್ತಿತ್ತು. ನಂತರ ಭಗವಾನ್ ವಿಷ್ಣು, ಶಕ್ತಿ ದೇವತೆಗಳಾದ ದುರ್ಗೆ, ಕಾತ್ಯಾಯಿನಿ, ಪಾರ್ವತಿ, ಗಣಪತಿ, ಹನುಮಂತ ಮತ್ತು ಇತರ ದೇವತೆಗಳ ಚಿತ್ರಣವೂ ಆರಂಭವಾಯಿತು. ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚು ಉಪಯೊಗದಲ್ಲಿದೆ. ರಂಗೋಲಿಯಲ್ಲಂತೂ ಸರಿಯೇ ಸರಿ. ಈ ರೀತಿ ಎಲ್ಲ ರೀತಿಯ ಜನಪದೀಯ ಅಂಶಗಳಿರುವ ಈ ಕಲೆ ಏಕಾಗಿ ಹೆಚ್ಚು ಜನಪ್ರಿಯವಾಗಿಲ್ಲ?
ಸೃಜನಶೀಲತೆಯನ್ನು ಪ್ರಚೋದಿಸುವ ಎಲ್ಲ ಅಂಶಗಳೂ ಇದ್ದರೂ ಈ ಕಲೆ ಹಲವಾರು ಸಂಪ್ರದಾಯಸ್ಥರ ಕೈಯಲ್ಲೇ ಉಳಿದು ಬಿಟ್ಟಿತ್ತು. ದೇವತೆಗಳ, ದೇವಾಲಯಗಳ ಅಲಂಕರಣೆಯಲ್ಲಿ ಹೆಚ್ಚಾಗಿ ಉಳಿದುಕೊಂಡ ಈ ಕಲೆ ನಿಂತ ನೀರಾಗಲೂ ಸಂಪ್ರದಾಯವಾದಿ ಕಲಾವಿದರೂ ಕಾರಣವಾಗಿರಬಹುದು. ತಾವು ಕಲಿತ ಕಲೆಯನ್ನು ಉದ್ದೇಶಪೂರ್ವಕವಾಗಿ ಗುಪ್ತವಾಗಿಡುವುದರಿಂದ ಮತ್ತು ತಾವು ಅದಕ್ಕಾಗಿ ಬಳಸುವ ವಿಶೇಷ ಕತ್ತರಿ ಚಾಕು ಮೊದಲದವನ್ನು ಇತರರಿಗೆ ತೋರಿಸದೇ ಇರುವುದರಿಂದ ಕಲೆಯ ಹರಿವು ಗುಟ್ಟಾಗಿಯೇ ಉಳಿದಿರಬಹುದು. ‘ಸಾಂಝಿ’ ಎಂದರೆ ಇಷ್ಟೇ. ಈ ಪರಿಧಿಯನ್ನು ಮೀರಿ ಹೊರ ಹೋಗಬಾರದು ಎಂಬ ನಿಯಮಾವಳಿಗಳನ್ನು ಕಟ್ಟುಪಾಡುಗಳನ್ನೂ ಪುರಾತನ ಕಲಾವಿದರು ಹಾಕಿದ್ದೇ ಸಾಂಝಿ ನಿಂತ ನೀರಾಗಲು ಕಾರಣವಾಗಿರಬಹುದು. ವಿಶಾಲಾರ್ಥದಲ್ಲಿ ನೋಡಿದರೆ ಸಾಂಝಿಯಂತಹ ಸೃಜನಶೀಲ ಕಲೆ ಸಹಾ ಕಾಲಕ್ಕೆ ತಕ್ಕಂತೆ ಅಪ್-ಡೇಟ್ ಆಗಿಲ್ಲದಿರುವುದೂ ಇದಕ್ಕೆ ಕಾರಣವಾಗಿರಬಹುದು. ಯಾವುದೇ ಕಲೆ ಕಾಲದ ಜೊತೆಗೆ ಹೆಜ್ಜೆ ಹಾಕುತ್ತಾ ಪರಿವರ್ತನೆಗೊಳ್ಳುತ್ತಾ ಹೋದರೆ ಜನಪ್ರಿಯತೆ ವೇಗ ಹೆಚ್ಚಬಹುದು. ಇಲ್ಲವಾದರೆ ನಿಂತ ನೀರಿನಂತೆ ಚಲನ ರಹಿತವಾಗಿಬಿಡಬಹುದು. ಆನಪ್ರಿಯತೆಯೂ ಕುಂದಬಹುದು. ಈ ಕಾರಣದಿಂದಾಗಿಯೆ ವಂಶಪಾರಂಪರ್ಯವಾಗಿ ದುಡಿಮೆಗಾಗಿ ಸಾಂಝಿಯನ್ನು ಅವಲಂಬಿಸಿದ್ದ ಕುಟುಂಬಗಳು ನಿಧಾನಕ್ಕೆ ಸಾಂಝಿಯನ್ನು ಕೈಬಿಡುತ್ತಾ ಬೇರೆ ಬೇರೆ ವೃತ್ತಿಗಳಿಗೆ ಹೊರಳುತ್ತಿದ್ದಾರೆ.
ಆದರೂ ಒಂದರ್ಥದಲ್ಲಿ ನೋಡಿದರೆ ಸಾಂಝಿ ಇನ್ನೂ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇದೆ. ಸಾಂಝಿ ನಮ್ಮಿಂದ ಸಂಪೂರ್ಣವಾಗಿ ಮರೆಯಾಗಿಲ್ಲ. ಕೈಮಗ್ಗದ ಬಟ್ಟೆಗಳ ವಿನ್ಯಾಸದಲ್ಲಿ, ಪರದೆಗಳ ಡಿಸೈನಿನಲ್ಲಿ, ಮಹಿಳೆಯರ ಹಣೆಯ ಮೇಲಿನ ಬಿಂದಿಯಲ್ಲಿ ಹೀಗೆ ನಾನಾ ನೆಲೆಯಲ್ಲಿ ಜೀವಂತವಾಗಿದೆ. ರಾಜಾಸ್ಥಾನ ಮತ್ತು ಹರ್ಯಾಣದ ಹ್ಯಾಂಡ್‌ಲೂಂನ ತಯಾರಿಕೆಗಳಲ್ಲಿ ಸಾಂಝಿ ವಿನ್ಯಾಸಗಳನ್ನು ಬಳಸಲಾಗುತ್ತದೆ, ಸೀರೆಗಳ ಮತ್ತು ಗೃಹ ಶೋಭೆಯನ್ನು ಹೆಚ್ಚಿಸುವ ಕರ್ಟನ್‌ಗಳಲ್ಲೂ ಈ ವಿನ್ಯಾಸಗಳು ಕಂಡುಬರುತ್ತವೆ, ಮಹಿಳೆಯರ ಕರಗಳನ್ನಲಂಕರಿಸುವ ಮೆಹಂದಿಯ ವಿನ್ಯಾಸಗಳೂ ಸಾಂಝಿಯೇ. ಗ್ರೀಟಿಂಗ್ ಕಾರ್ಡ್ ವಿನ್ಯಾಸಗಾರರೂ, ಸಮಾರಂಭಗಳ ಅಲಂಕಾರ ಮಾಡುವವರೂ ಸಾಂಝಿಯನ್ನು ತಮ್ಮ ವೃತ್ತಿಯಲ್ಲೆ ಅಳವಡಿಸಿಕೊಂಡಿರುತ್ತಾರೆ. ಮತ್ತೊಂದು ದಿಕ್ಕಿನಲ್ಲಿ ಉತ್ತರ ಭಾರತದ ಹಳ್ಳಿಗಳಲ್ಲಿರುವ ಮಹಿಳೆಯರು ತಮಗೇ ಅರಿವಿಲ್ಲದೆ ಸಾಂಝಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಆಧುನಿಕ ತಾಂತ್ರಿಕತೆಯ ಸಹಕಾರದಲ್ಲಿ ಹಲವಾರು ಗ್ರಾಫಿಕ್‌ಗಳಿಗೆ ಈ ಕಲೆಯನ್ನು ಬಳಸಲಾಗುತ್ತಿದೆ. ಸಾಂಝಿಯ ಚಿತ್ರಗಳನ್ನು ಆಧರಿಸಿ ಹಲವಾರು ಅನಿಮೇಶನ್ ಚಿತ್ರಗಳೂ ತಯಾರಾಗಿ ವಿದೇಶಗಳ ಚಿತ್ರೋತ್ಸವಗಳಲ್ಲಿ ಸಮ್ಮಾನ ಗಳಿಸಿವೆ. ತೊಗಲು ಬೊಂಬೆಯಾಟದಂತೆ ಸಾಂಝಿಯನ್ನೂ ಉಪಯೊಗಿಸುವ ಪ್ರಯೋಗಗಳೂ ನಡೆದಿವೆ.
ಮತ್ತೆ ಸಾಂಝಿ
ಹಿಂದೆ ಜನಪ್ರಿಯವಾಗಿದ್ದೂ ಕಾಲಾಂತರದಲ್ಲಿ ಜನರ ಸ್ಮರಣೆಯಿಂದ ಮರೆತೇ ಹೋಗಿದ್ದ “ಗಂಜೀಫಾ” ಕಲೆ ಇತ್ತೀಚೆಗೆ ಕಳೆದೊಂದು ದಶಕದಲ್ಲಿ ಜನಪ್ರಿಯವಾದಂತೆ ಸಾಂಝಿಯನ್ನೂ ಜನಪ್ರಿಯಗೊಳಿಸುವ ಚಟುವಟಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹಲವಾರು ಕಲಾವಿದರು ಸಾಂಝಿಯನ್ನು ಆಧುನಿಕಗೊಳಿಸುವಮೂಲಕ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಾಂಝಿಯಲ್ಲಿ ಮೊದಲಾದ ಹಲವಾರು ಸಾಧ್ಯತೆಗಳನ್ನು ಪರಿಶೀಲಿಸುತ್ತಾ ಭಾರತದ ಒಳಗೂ ಹೊರಗೂ ಅದನ್ನು ಜನಪ್ರಿಯಗೊಳಿಸಲು ಕ್ರಿಯಾಶೀಲರಾಗಿರುವ ಕಲಾವಿದರಿದ್ದಾರೆ. ದೆಹಲಿಯಲ್ಲಿರುವ ‘ಡೆಲ್ಲಿ ಕ್ರಾಫ್ಟ್ ಕೌನ್ಸಿಲ್’ ಸಹಾ ಈ ಕಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸೂರಜ್ ಕುಂಡದ ವಾರ್ಷಿಕ ಕ್ರಾಫ್ಟ್ ಮೇಳದಲ್ಲಿ ಸಾಂಝಿ ಪ್ರಧಾನ ಆಕರ್ಷಣೆಯಾಗಿರುತ್ತದೆ. ಕೆಲವರು ವಿದೇಶೀಯರು ಸಹಾ ‘ಭಾರತೀಯ ಸಾಂಝಿಯ’ಯನ್ನು ಕಾಫ್‌ಮಗ್, ಟೀಟ್ರೇ, ಲ್ಯಾಂಪ್‌ಶೇಡ್‌ಗಳಲ್ಲಿ ಉಪಯೋಗಿಸುವ ಮೂಲಕ ಅದಕ್ಕೆ ವ್ಯಾವಹಾರಿಕ ಆಯಾಮವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕರ್ನಾಟಕಕ್ಕೆ ಬಂದರೆ ಇಲ್ಲಿ ಸಹಾ ಸಾಂಝಿ ಮತ್ತು ಸಾಂಝಿಯಿಂದ ಹುಟ್ಟಿಕೊಂಡಿರಬಹುದಾದ ಹಲವು ಮಾದರಿಯ ಪೇಪರ್ ಕ್ರಾಫ್ಟ್ ಕಲೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿರುವ ಹಲವಾರು ಕಲಾವಿದರು ಕಂಡುಬರುತ್ತಾರೆ.
“ಸಾಂಝಿ ಎಂದರೆ ಅದು ನಮ್ಮ ಜನಪದರಿಂದ ಆವಿಷ್ಕರಿಸಲ್ಪಟ್ಟ ನಮ್ಮದೇ ಕಲೆ. ಅದನ್ನು ಬೇರೆಯದಕ್ಕೆ ಯಾಕೆ ಹೋಲಿಸಬೇಕು. ಅದಕ್ಕೆ ಬೇರೆ ಯಾವುದೇ ಪ್ರಭಾವಳಿ ಬೇಡ.” ಎಂಬುದು ಕರ್ನಾಟಕದ ಸಂದರ್ಭದಲ್ಲಿ ಕ್ರಿಯಾಶೀಲವಾಗಿರುವ ಕಲಾವಿದರಲ್ಲೊಬ್ಬರಾದ ಮೈಸೂರು ಹುಸೇನಿ ಅವರ ವಾದ. “ಶತಮಾನಗಳಿಂದ ನಮ್ಮ ದೇವಾಲಯಗಳಲ್ಲೂ, ಸಾಂಪ್ರದಾಯಿಕ ಸಮಾರಂಭಗಳಲ್ಲೂ ಕಾಗದಗಳ ವಿನ್ಯಾಸಗಳನ್ನು ಸೃಷ್ಟಿಸುತ್ತಿರುವ ನಮ್ಮ ಜನಪದರು ಚೀನಾ, ಜಪಾನ್, ಮೆಕ್ಸಿಕೊ, ಜರ್ಮನಿ, ಸ್ಪೇನ್‌ಗಳಿಗೆ ಹೋಗಿಬಂದವರೇನಲ್ಲ. ಅಥವಾ ಆ ದೇಶಗಳ ಹೆಸರು ಕೇಳಿದವರೂ ಅಲ್ಲ.ಇದು ಇಲ್ಲಿನ ಸಾಂಸ್ಕೃತಿಕ ಹಿನ್ನೆಯಲ್ಲಿಯೇ ಅರಳಿದ ಕಲೆ.” ಎಂಬುದು ಅವರ ಬಲವಾದ ವಾದ. ಬಹಳ ಹಿಂದಿನಿಂದಲೂ ನಮ್ಮಲ್ಲಿ ಬಾಸಿಂಗಗಳನ್ನು ತಯಾರಿಸುವ, ಹತ್ತಿಯ ಪೂಜಾ ಪರಿಕರಗಳನ್ನು ತಯಾರಿಸುವ, ದೇವಾಲಯ ಅಲಂಕರಣೆ ಮಾಡುವ ಮೂಲಕವೇ ಜೀವನಕ್ಕೊಂದು ಮಾರ್ಗವನ್ನು ಕಂಡುಕೊಂಡ ಎಷ್ಟೋ ಕುಟುಂಬಗಳಿದ್ದವು. ಆದರೆ ಅವರೆಲ್ಲ ಈ ಕಲೆಯನ್ನು ತಮ್ಮಲ್ಲೇ ಇಟ್ಟುಕೊಂಡ ಕಾರಣದಿಂದ ಮುಂದಿನ ಪೀಳಿಗೆಗೆ ಈ ಕಲೆ ಸಹಜವಾಗಿ ಹಸ್ತಾಂತರವಾಗಿಲ್ಲ. ಆದರೆ ಜಪಾನ್ ಚೀನಾ ಮೊದಲಾದ ದೇಶಗಳು ಜತನದಿಂದ ಕಾದಿಡುತ್ತ, ಅದರ ಬಗೆಗೆ ಹಲವಾರು ಪುಸ್ತಕಗಳನ್ನು ರಚಿಸಿ ತಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಿ ತಮ್ಮ ಕಲೆಯನ್ನು ನಿರಂತರವಾಗಿ ಜೀವಂತವಾಗಿರಿಸಿಕೊಂಡಿದ್ದಾರಲ್ಲದೆ ಇದು ‘ನಮ್ಮ ಕಲೆ’ ಎಂಬ ಅಭಿಮಾನದಿಂದ ವಿದೇಶಗಳಿಗೂ ನಿರಂತರವಾಗಿ ಪರಿಚಯಿಸುತ್ತಿದ್ದಾರೆ. ಪೇಪರ್ ಕ್ರಾಫ್ಟ್ನ ಬಗ್ಗೆ ತೀವ್ರ ಕುತೂಹಲವಿರುವ ದೇಶಗಳೆಲ್ಲ ಸೇರಿ ಆ ವಿಷಯದ ಮೇಲೆ ಒಂದು ವಿಶ್ವ ಸಮ್ಮೇಳನವನ್ನೂ ನಡೆಸಿದ್ದಾರೆ.
ಸಾಂಝಿ ಇರಬಹುದು, ಸಾಂಝಿಯ ನೆರಳಿನಲ್ಲಿ ಅದರ ಪ್ರಭಾವದಲ್ಲಿ ಹುಟ್ಟಿಕೊಂಡ ಮತ್ತೊಂದು ಕಲೆ ಇರಬಹುದು. ಅವೆಲ್ಲವನ್ನೂ ನಮ್ಮಲ್ಲೂ ಸಹಾ ವಿಸ್ತೃತ ರೀತಿಯಲ್ಲಿ ಇದನ್ನು ಪುನರುಜ್ಜೀವನಗೊಳಿಸಿದರೆ ನಮ್ಮದೇ ಆದ, ಪುರಾತನವೂ, ಜಾನಪದೀಯವೂ ಮತ್ತು ಸಾಂಪ್ರದಾಯಿಕವೂ ಆಗಿರುವ ವಿಶಿಷ್ಟ ಕಲೆಯನ್ನು ಬೆಳಗಿಸಿ ಹೆಮ್ಮೆಯಿಂದ ಲೋಕಕ್ಕೆಲ್ಲ ಪ್ರಸ್ತುತಪಡಿಸಬಹುದು.


By. Keshava kudla
(ಇಲ್ಲಿನ ಚಿತ್ರಗಳ ಕಲಾವಿದರು ಮೈಸೂರು ಹುಸೇನಿ)